ಹೊಸನಗರ
	ಭಾರತದ ಕರ್ನಾಟಕ ರಾಜ್ಯದ ಶಿವಮೊಗ್ಗ ಜಿಲ್ಲೆಯ ಒಂದು ತಾಲ್ಲೂಕು ಮತ್ತು ತಾಲ್ಲೂಕಿನ ಆಡಳಿತ ಕೇಂದ್ರ. ಈ ತಾಲ್ಲೂಕನ್ನು ವಾಯವ್ಯ ಮತ್ತು ಉತ್ತರದಲ್ಲಿ ಸಾಗರ ತಾಲ್ಲೂಕೂ ಈಶಾನ್ಯದಲ್ಲಿ ಶಿವಮೊಗ್ಗ, ಪೂರ್ವ ಮತ್ತು ದಕ್ಷಿಣದಲ್ಲಿ ತೀರ್ಥಹಳ್ಳಿ ತಾಲ್ಲೂಕೂ ಪಶ್ಚಿಮದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕುಂದಾಪುರ ತಾಲ್ಲೂಕೂ ಸುತ್ತುವರಿದಿವೆ. ನಗರ, ಹೊಸನಗರ, ಹುಮಚ ಹಾಗೂ ಕೆರೆಹಳ್ಳಿ ಹೋಬಳಿಗಳು. ಒಂದು ಪಟ್ಟಣ ಮತ್ತು 209 ಗ್ರಾಮಗಳಿವೆ. ವಿಸ್ತೀರ್ಣ 1,423.3 ಚ.ಕಿಮೀ. ಜನಸಂಖ್ಯೆ 1,15,019.

	ಈ ತಾಲ್ಲೂಕು ಜಿಲ್ಲೆಯ ಮಲೆನಾಡು ಪ್ರದೇಶಕ್ಕೆ ಸೇರಿದ್ದು ಪೂರ್ವದ ಕಡೆಗೆ ಇಳಿಜಾರಾಗಿದೆ. ಈ ತಾಲ್ಲೂಕಿನ ಮೂರು ಕಡೆಯೂ ಪಶ್ಚಿಮಘಟ್ಟ ಸುತ್ತುವರಿದಿದ್ದು ಹುಲಿಕಲ್ಲು ಮತ್ತು ಕೊಲ್ಲೂರು ಕಣಿವೆಗಳಿವೆ. ಈ ಕಣಿವೆಗಳ ಮುಖಾಂತರ ದಕ್ಷಿಣ ಕನ್ನಡ ಜಿಲ್ಲೆಗೆ ಪ್ರವೇಶ. ಈ ತಾಲ್ಲೂಕಿನಲ್ಲಿ ನಿಸರ್ಗಸೌಂದರ್ಯ ಮನೋಹರವಾಗಿದ್ದು ಸಹ್ಯಾದ್ರಿ ಬೆಟ್ಟಗಳ ಸಾಲು, ದಟ್ಟ ಅರಣ್ಯ ಮತ್ತು ಆಳವಾದ ಕಣಿವೆಗಳಿಂದ ಕೂಡಿದೆ. ಈ ತಾಲ್ಲೂಕಿನ ನೈಋತ್ಯಕ್ಕಿರುವ ಕೊಡಚಾದ್ರಿ 1,343 ಮೀ ಎತ್ತರವಿದೆ. ಹುಮಚದ ಬಳಿ 864.41 ಮೀ ಎತ್ತರವಿರುವ ಅಗಸ್ತ್ಯಪರ್ವತವಿದೆ. ಇವಲ್ಲದೆ ಕೆಲವು ಸಣ್ಣಪುಟ್ಟ ಗುಡ್ಡಗಳು ಈ ತಾಲ್ಲೂಕಿನಲ್ಲಿವೆ. ಶರಾವತಿ (ನೋಡಿ- ಶರಾವತಿ) ತಾಲ್ಲೂಕಿನ ಮುಖ್ಯ ನದಿ. ತೀರ್ಥಹಳ್ಳಿ ತಾಲ್ಲೂಕಿನಿಂದ ಹರಿದು ಬರುವ ಈ ನದಿ ತಾಲ್ಲೂಕಿನಲ್ಲಿ ವಾಯವ್ಯಾಭಿಮುಖವಾಗಿ ಹರಿಯುವುದು. ಈ ನದಿಯ ಲಿಂಗನಮಕ್ಕಿ ಜಲಾಶಯದ ಹಿನ್ನೀರು ಈ ತಾಲ್ಲೂಕಿನ ವಾಯವ್ಯಭಾಗದಲ್ಲಿ ಹರಡಿ ನಗರ ಮತ್ತು ಹೊಸನಗರದ ವರೆಗೂ ಚಾಚಿಕೊಂಡಿದೆ. ಇದಲ್ಲದೆ ಹುಮಚದ ಅಗಸ್ತ್ಯಪರ್ವತದಲ್ಲಿ ಹುಟ್ಟುವ ಕುಮುದ್ವತಿ ಈ ತಾಲ್ಲೂಕಿನ ಪೂರ್ವದಲ್ಲಿ ಸ್ವಲ್ಪ ದೂರ ಹರಿದು ಶಿವಮೊಗ್ಗ ತಾಲ್ಲೂಕನ್ನು ಪ್ರವೇಶಿಸುವುದು. ಹರಿದ್ರಾವತಿ, ಸರ್ಮಣಾವತಿ, ವರಾಹಿ ಮುಂತಾದ ಸಣ್ಣ ನದಿತೊರೆಗಳು ಈ ತಾಲ್ಲೂಕಿನಲ್ಲಿ ಹರಿಯುತ್ತವೆ. ತಂಪಾದ ಹವಾಗುಣವಿರುವ ಈ ತಾಲ್ಲೂಕಿನ ವಾರ್ಷಿಕ ಸರಾಸರಿ ಮಳೆ 2,786.94 ಮಿಮೀ. ಜಿಲ್ಲೆಯ ಹೆಚ್ಚು ಮಳೆ ಬೀಳುವ ತಾಲ್ಲೂಕುಗಳಲ್ಲಿ ಇದು ಎರಡನೆಯದು. ಮಲೆನಾಡು ಪ್ರದೇಶಕ್ಕೆ ಸೇರಿದ ಈ ತಾಲ್ಲೂಕಿನಲ್ಲಿ ಸಾಕಷ್ಟು ಮಳೆ ಬೀಳುವುದರಿಂದ ದಟ್ಟ ಕಾಡುಗಳಿದ್ದು 25,437 ಹೆಕ್ಟೇರ್ ಅರಣ್ಯಪ್ರದೇಶವೂ 65,790 ಹೆಕ್ಟೇರ್‍ಗಳ ಖಾಯಂ ಹುಲ್ಲುಗಾವಲೂ ಇತ್ತು. ಈ ತಾಲ್ಲೂಕಿನ ಅರಣ್ಯ ಪ್ರದೇಶದಲ್ಲಿ ಧೂಪ, ಬಲ್ಲಗಿ, ಹೆಬ್ಬಲಸು, ಸುರಹೊನ್ನೆ, ಕೀರಲಬೋಗಿ, ನಾಗಸಂಪಿಗೆ, ಹಲಸು, ಮಾವು, ಗುಳಮಾವು, ಸಂಪಿಗೆ, ಮದ್ದಲೆ, ಹೈಗಾ, ಕರಿಮರ, ಹೊಲೆಮತ್ತಿ ಮುಂತಾದ ಬೆಲೆಬಾಳುವ ಮರಗಳು ಬೆಳೆಯುತ್ತವೆ. ಆನೆ, ಕಾಡುಕೋಣ, ಜಿಂಕೆ, ಹುಲಿ, ಚಿರತೆ, ಕರಡಿ ಮುಂತಾದ ನಾನಾಬಗೆಯ ಕಾಡುಪ್ರಾಣಿ ಗಳನ್ನೂ ವಿವಿಧ ಬಗೆಯ ಪಕ್ಷಿಗಳನ್ನೂ ಹಾವುಗಳನ್ನೂ ಇಲ್ಲಿನ ಅರಣ್ಯಗಳಲ್ಲಿ ಕಾಣಬಹುದು.

	ತಾಲ್ಲೂಕಿನಲ್ಲಿ ಮರಳುಮಿಶ್ರಿತ ಕೆಂಪುಜೇಡಿಮಣ್ಣಿನ ಭೂಮಿಯಿದೆ. 1182 ಕೆರೆಗಳಿದ್ದು ಅವುಗಳ ನೀರನ್ನು ವ್ಯವಸಾಯಕ್ಕೆ ಬಳಸಿಕೊಳ್ಳಲಾ ಗುತ್ತಿದೆ. ಇವುಗಳ ಜೊತೆಗೆ ಸ್ವಾಭಾವಿಕ ಊಟೆಗಳಿದ್ದು ಅವುಗಳಿಗೆ ಸಣ್ಣ ಕಟ್ಟೆಗಳನ್ನು ಕಟ್ಟಿ ನೀರನ್ನು ವ್ಯವಸಾಯಕ್ಕೆ ಬಳಸಿಕೊಳ್ಳುವರು. ಬತ್ತ, ರಾಗಿ, ಕಬ್ಬು, ನೆಲಗಡಲೆ, ಕೆಲವು ದ್ವಿದಳ ಧಾನ್ಯಗಳನ್ನು ಬೆಳೆಯುತ್ತಾರೆ. ತೋಟಗಳಲ್ಲಿ ಮುಖ್ಯವಾಗಿ ಅಡಕೆ, ತೆಂಗು, ಗೋಡಂಬಿ, ವಿವಿಧ ಫಲ ಮತ್ತು ತರಕಾರಿಗಳನ್ನು ಬೆಳೆಯುತ್ತಾರೆ. ವ್ಯವಸಾಯದ ಜೊತೆಗೆ ಪಶುಪಾಲನೆಯುಂಟು. ನದಿ, ತೊರೆಗಳು ಲಿಂಗನಮಕ್ಕಿ ಜಲಾಶಯದ ವಿಶಾಲಭಾಗ ಈ ತಾಲ್ಲೂಕಿನಲ್ಲಿದ್ದು ಮತ್ಸ್ಯೋದ್ಯಮದ ಅಭಿವೃದ್ಧಿಗೆ ಸಾಕಷ್ಟು ಅವಕಾಶಗಳಿವೆ.

	ಈ ತಾಲ್ಲೂಕಿನ ಕೆಲವು ಕಡೆ ಉತ್ತಮವಾದ ಕಬ್ಬಿಣದ ಅದುರು ನಿಕ್ಷೇಪವಿರುವುದು ಪತ್ತೆಯಾಗಿದೆ. ಇದರ ಉತ್ಪಾದನಾಕಾರ್ಯ ಪ್ರಾರಂಭವಾದರೆ ತಾಲ್ಲೂಕಿನ ಕೈಗಾರಿಕಾ ಸ್ವರೂಪವೇ ಬದಲಾಗಬಹುದು. ಬಟ್ಟೆಗಳಿಗೆ ಬಣ್ಣ ಕೊಡುವ ವರ್ಣದ್ರವ್ಯ ತಯಾರಿಕಾ ಕಾರ್ಖಾನೆಯೊಂದಿದೆ. ದಟ್ಟ ಅರಣ್ಯಗಳಿಂದ ಕೂಡಿದ ಈ ತಾಲ್ಲೂಕು ಬಿದಿರಿನ ಕೈಗಾರಿಕೆಯಲ್ಲಿ ಜಿಲ್ಲೆಗೇ ಮೊದಲನೆಯದು. ಮರಗೆಲಸವೂ ಇಲ್ಲಿನ ಒಂದು ಮುಖ್ಯ ಕೈಗಾರಿಕೆಯಾಗಿದೆ. ಇದರ ಜೊತೆಗೆ ಅರಣ್ಯಾವಲಂಬಿತ ಸಣ್ಣಪುಟ್ಟ ಕೈಗಾರಿಕೆಗಳಿವೆ. ರಾಜ್ಯ ಮತ್ತು ಜಿಲ್ಲಾ ಹೆದ್ದಾರಿಗಳೂ ತಾಲ್ಲೂಕು ರಸ್ತೆಗಳೂ ಇದ್ದು ತಾಲ್ಲೂಕಿನ ಈಶಾನ್ಯದಲ್ಲಿ ಸ್ವಲ್ಪದೂರ ಶಿವಮೊಗ್ಗ-ಸಾಗರ ರೈಲುಮಾರ್ಗ ಹಾದುಹೋಗಿದೆ.

	ಈ ತಾಲ್ಲೂಕಿನ ಪ್ರೇಕ್ಷಣೀಯ ಸ್ಥಳಗಳಲ್ಲಿ ಹುಮಚ (ನೋಡಿ- ಹುಮಚ) ಹೊಸನಗರಕ್ಕೆ ಆಗ್ನೇಯದಲ್ಲಿ 19 ಕಿಮೀ ದೂರದಲ್ಲಿದೆ. ಇದೊಂದು ಪ್ರಸಿದ್ಧ ಜೈನ ಯಾತ್ರಾಸ್ಥಳ. ಹೊಸನಗರದಿಂದ ದಕ್ಷಿಣಕ್ಕೆ 18 ಕಿಮೀ ದೂರದಲ್ಲಿರುವ ನಗರ ಕೆಳದಿ ನಾಯಕರ ಕಾಲದಲ್ಲಿ ರಾಜಧಾನಿಯಾಗಿತ್ತು. ಹೊಸನಗರದ ನೈಋತ್ಯಕ್ಕೆ 27 ಕಿಮೀ ದೂರದಲ್ಲಿರುವ ನಿಡಗೋಡು ದಟ್ಟ ಅರಣ್ಯಮಧ್ಯದಲ್ಲಿದೆ. ಇದರ ಸಮೀಪದಲ್ಲಿ ಆಗುಂಬೆ ಘಟ್ಟವಿದ್ದು ಅಲ್ಲಿಂದ ಸೂರ್ಯಾಸ್ತದ ಸೊಬಗನ್ನು ಸವಿಯಬಹುದು. ನಿಡುಗೋಡು ಸಮೀಪದಲ್ಲಿ ವರಾಹಿ ನದಿಯ ಕುಂಚಿಕಲ್ಲು ಜಲಪಾತವಿದೆ. ಲಕ್ಷ್ಮೀನರಸಿಂಹ, ಚಂಡಿಕಾಂಬಾ ಗುಡಿಗಳಿವೆ. ಹೊಸನಗರದ ಪೂರ್ವಕ್ಕೆ ಸು. 20 ಕಿಮೀ ದೂರದಲ್ಲಿರುವ ಅಗಸ್ತ್ಯಪರ್ವತ ಪ್ರಕೃತಿಸೌಂದರ್ಯದ ಒಂದು ತಾಣ. ಇದು ಹರಿದ್ರಾವತಿ, ಕುಮುದ್ವತಿ, ಕುಶವತಿ ನದಿಗಳ ಉಗಮಸ್ಥಾನವಾಗಿದ್ದು ದಟ್ಟವಾದ ಅರಣ್ಯದಿಂದ ತುಂಬಿದೆ. ಹೊಸನಗರದ ದಕ್ಷಿಣಕ್ಕೆ 6 ಕಿಮೀ ಅಂತರದಲ್ಲಿರುವ ರಾಮಚಂದ್ರಪುರದಲ್ಲಿ ಸ್ಮಾರ್ತ ಹವ್ಯಕರ ಮಠವಿದೆ. ಇಲ್ಲಿ ಒಂದು ಸುಂದರ ದಂತದ ಸಿಂಹಾಸನವಿದೆ.

	ಹೊಸನಗರ ಈ ತಾಲ್ಲೂಕಿನ ಆಡಳಿತ ಕೇಂದ್ರ ಹಾಗೂ ಪಟ್ಟಣ. ಶಿವಮೊಗ್ಗದ ಪಶ್ಚಿಮಕ್ಕೆ 72 ಕಿಮೀ ದೂರದಲ್ಲಿದೆ. ಕುಂದಾಪುರ-ಸಾಗರ ಮತ್ತು ಕುಂಸಿ-ಕೊಡಚಾದ್ರಿ ಮಾರ್ಗಮಧ್ಯದಲ್ಲಿದೆ. ಹೊಸನಗರದ ಈಶಾನ್ಯಕ್ಕೆ 30 ಕಿಮೀ ದೂರದಲ್ಲಿರುವ ಅರಸಲು ರೈಲು ನಿಲ್ದಾಣವೇ ಈ ಪಟ್ಟಣಕ್ಕೆ ಹತ್ತಿರವಿರುವ ರೈಲು ಸಂಪರ್ಕ. ಜನಸಂಖ್ಯೆ 5,042.

	ಪಟ್ಟಣ ತಾಲ್ಲೂಕಿನ ಮುಖ್ಯವ್ಯಾಪಾರಕೇಂದ್ರ. ಈ ಪಟ್ಟಣದಿಂದ ಬತ್ತ, ಅಡಕೆ ಹೆಚ್ಚಾಗಿ ಹೊರಹೋಗುವ ವಸ್ತುಗಳು. ಈ ಪಟ್ಟಣ ಲಿಂಗನಮಕ್ಕಿ ಜಲಾಶಯದ ಹಿನ್ನೀರಿನ ಹತ್ತಿರವಿದೆ. ಇಲ್ಲಿಂದ ಸುತ್ತಲ ಪಟ್ಟಣ ಮತ್ತು ಗ್ರಾಮಗಳಿಗೆ ರಸ್ತೆ ಸಂಪರ್ಕವಿದೆ. ಪಟ್ಟಣದಲ್ಲಿ ಲಿಂಗನಮಕ್ಕಿ ಜಲಾಶಯದಲ್ಲಿ ಮುಳುಗಿಹೋದ ಕೆಳದಿ ನಾಯಕರು ಕಟ್ಟಿಸಿದ್ದ ವೀರಭದ್ರಪುರ ಗ್ರಾಮದ ವೀರಭದ್ರ ದೇವಾಲಯದ ಭಾಗಗ ಳನ್ನೇ ತಂದು ಕಟ್ಟಿರುವ ಈಶ್ವರ ದೇವಾಲಯವಿದೆ.  		
		(ಎಚ್.ಆರ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ